ಕಾಂಪ್ಟನ್, ಆರ್ಥರ್ ಹೋಲಿ

1892-1962. ಅಮೆರಿಕನ್ ಭೌತವಿಜ್ಞಾನಿ. ಜನನ ಸೆಪ್ಟೆಂಬರ್ 10 1892ರಂದು. ಅಮೆರಿಕದ ಒಹಾಯೋ ಪ್ರಾಂತದ ವೂಸ್ಟರ್ ಎಂಬಲ್ಲಿ. 1913ರಲ್ಲಿ ವೂಸ್ಟರ್ ಕಾಲೇಜಿನಲ್ಲಿ (ಅಲ್ಲಿ ಆತನ ತಂದೆ ಡೀನ್ ಆಗಿದ್ದ) ತನ್ನ ಸ್ನಾತಕಮಟ್ಟದ ವಿದ್ಯಾಭ್ಯಾಸ ಮುಗಿಸಿ ಹೆಸರಾಂತ ಪ್ರಿನ್‍ಸ್ಟನ್ ವಿಶ್ವವಿದ್ಯಾಲಯದಲ್ಲಿ 1916ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಅನಂತರ ಮಿನ್ನಸೋಟಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ 1916-17ರವರೆಗೆ ಕೆಲಸ ಮಾಡಿದ. ನಂತರದ ಎರಡುವರ್ಷ ಪಿಟ್ಸ್‍ಬರ್ಗ್‍ನಲ್ಲಿರುವ ಲ್ಯಾಪ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ. 1919ರಿಂದ 1920ರ ವರೆಗೆ ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾಲಯದ ಖ್ಯಾತ ಕ್ಯಾವೆಂಡಿಷ್ ಪ್ರಯೋಗಶಾಲೆಯಲ್ಲಿ ಕೆಲಸಮಾಡಿದ. 1920ರಿಂದ 1923ರ ವರೆಗೆ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲೂ 1923-1945ರ ವರೆಗೆ ಚಿಕಾಗೋ ವಿಶ್ವವಿದ್ಯಾಲಯದಲ್ಲೂ ಪ್ರಾಧ್ಯಾಪಕನಾಗಿದ್ದ. 1940ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನ ವಿಭಾಗದ ಡೀನ್ ಆಗಿ ನೇಮಕಗೊಂಡ. ಚಿಕಾಗೋದಲ್ಲಿರುವಾಗಲೇ ಅಂದರೆ 1926-27ರ ವರೆಗೆ ಭಾರತದ ಪಂಜಾಬ್ ವಿಶ್ವವಿದ್ಯಾಲಯ 1934-35ರವರೆಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಮತ್ತು 1940ರಲ್ಲಿ ವಾಷಿಂಗ್‍ಟನ್ ವಿಶ್ವವಿದ್ಯಾಲಯಗಳಲ್ಲಿ ಈತ ಗೌರವ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. 1945ರಿಂದ 1953ರವರೆಗೆ ಸೇಂಟ್ ಲೂಯಿಯಲ್ಲಿರುವ ವಾಷಿಂಗ್‍ಟನ್ ವಿಶ್ವವಿದ್ಯಾಲಯದ ಕುಲಾಧಿಪತಿ (ಛಾನ್ಸಲರ್) ಆಗಿದ್ದ. ಹೀಗೆ ಕಾಂಪ್ಪನ್ನನ ಕಾರ್ಯಕ್ಷೇತ್ರ ವ್ಯಾಪಕವಾಗಿದ್ದರೂ ವಿಜ್ಞಾನದ ಮೂಲ ಸಂಶೋಧನೆಯೇ ಸದಾ ಈತನ ಒಲವಿತ್ತು. 

 1942ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದ ಲೋಹಶಾಸ್ತ್ರ ಪ್ರಯೋಗಶಾಲೆಯ ಮುಖ್ಯಸ್ಥನಾಗಿದ್ದುಕೊಂಡು ಪರಮಾಣು ಬಾಂಬಿಗೆ ಬೇಕಾದ ಪ್ಲುಟೋನಿಯಂ ತಯಾರಿಕೆಯ ಸಂಶೋಧನೆಯನ್ನೀತ ನಿರ್ದೇಶಿಸಿದ. ಇದು ಮುಖ್ಯವಾಗಿ ಎಕ್ಸ್‍ಕಿರಣ ಮತ್ತು ಗಾಮಕಿರಣಗಳಿಗೆ ಸಂಬಂಧಪಟ್ಟದ್ದಾಗಿತ್ತು. ಈತನ ಹೆಸರಿನಿಂದಲೇ ಪ್ರಸಿದ್ಧವಾಗಿರುವ ಕಾಂಪ್ಪನ್ ಪರಿಣಾಮವನ್ನು 1920ರಲ್ಲಿ ಆವಿಷ್ಕರಿಸಿದ. ಕೆಲವು ಪದಾರ್ಥಗಳು ಎಕ್ಸ್-ಕಿರಣಗಳನ್ನು ಚದರಿಸಿದಾಗ ಉಂಟಾಗುವ ಅಲೆಯುದ್ಧದ ಹಿಗ್ಗುವಿಕೆಗೆ ಕಾಂಪ್ಟನ್ ಪರಿಣಾಮ ಎಂದು ಹೆಸರು. ಅಲ್ಪ ತೂಕದ ರಾಸಾಯನಿಕ ಧಾತುವಿನಿಂದ ಇವು ಚದರಿಸಲ್ಪಡುವಾಗ ಈ ಪರಿಣಾಮ ಪ್ರಕಟವಾಗುತ್ತದೆ. ಇದಕ್ಕಾಗಿ ಈತನಿಗೆ 1927ರಲ್ಲಿ (ಮೇಘಮಂದಿರ ರಚಿಸಿದ ಇಂಗ್ಲೆಂಡಿನ ಸಿ.ಟಿ.ಆರ್. ವಿಲ್ಸನ್ನನೊಡನೆ) ನೊಬೆಲ್ ಪಾರಿತೋಷಕ ಲಭಿಸಿತು.

 ಭೌತಶಾಸ್ತ್ರದ ಮೂಲ ಸಂಶೋದನೆಯಲ್ಲಿ ಬಹು ಆಸಕ್ತಿಯಿದ್ದ ಈ ವಿಜ್ಞಾನಿ ಕೈಗಾರಿಕಾ ಸಲಹಾಗಾರನೂ ಆಗಿದ್ದ. ಸೋಡಿಯಂ ಆವಿ ದೀಪ ಮತ್ತು ಪ್ರತಿದೀಪ್ತ ಶೀಲ (ಪ್ಲೊರಸೆಂಟ್) ಬೆಳಕಿನ ಉತ್ಪನ್ನದ ವಿಷಯಗಳಲ್ಲಿ ಈತ ಕೆಲಸ ಮಾಡಿದ್ದಾನೆ. ವಿಜ್ಞಾನದಲ್ಲದ್ದಷ್ಟೇ ತೀವ್ರ ಆಸಕ್ತಿ ಮಾನವಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿಯೂ ಈತನಿಗಿತ್ತು. ಅಮೆರಿಕದಲ್ಲಿ ಸರ್ವಮತಧರ್ಮಸಹಿಷ್ಣುತೆ, ವರ್ಣಭೇದ ನಿರ್ಮೂಲನ ಮತ್ತು ಅಂತರಾಷ್ಟ್ರೀಯ ಸಹಕಾರಕ್ಕಾಗಿ ಈತ ಬಹುವಾಗಿ ಶ್ರಮಿಸುತ್ತಿದ್ದ.

 ಕಾಂಪ್ಪನ್ ಬರೆದು ಪ್ರಕಟಿಸಿರುವ ಕೆಲವು ಪ್ರಸಿದ್ಧ ವಿಜ್ಞಾನ ಪ್ರಬಂಧಗಳಿವು: 1 ಎಕ್ಸ್ ಕಿರಣಗಳಿಂದುಂಟಾದ ದ್ವಿತೀಯ ರಶ್ಮಿಗಳು (1922), 2 ಎಕ್ಸ್ ಕಿರಣಗಳು ಮತ್ತು ಎಲೆಕ್ಟ್ರಾನುಗಳು (1926),  3 ಎಸ್. ಕೆ. ಆಲಿಸನನೊಡನೆ ಬರೆದಿರುವ ಉತ್ತಮ ಕೃತಿ-ಪ್ರಯೋಗ ಮತ್ತು ಸಿದ್ಧಾಂತದಲ್ಲಿ ಎಕ್ಸ್ ಕಿರಣಗಳು (1933), 4 ಮನುಷ್ಯನ ಸ್ವಾತಂತ್ರ್ಯ (1935), 5 ವಿಜ್ಞಾನದ ಮಾನವೀಯ ಅರ್ಥ (1946), 6 ಪರಮಾಣು (1956)

 1953ರಿಂದ 1961ರ ವರೆಗೆ ವಾಷಿಂಗ್‍ಟನ್ ವಿಶ್ವವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ ಕಾಂಪ್ಟನ್ 1961ರಲ್ಲಿ ರಾಜಿನಾಮೆಯಿತ್ತು ಆ ಕೆಲಸದಿಂದ ಹೊರಬಂದ. ಈತ ಮರಣಹೊಂದಿದ್ದು ಮಾರ್ಚ್ 15, 1962ರಲ್ಲಿ.

            

(ಪಿ.ವಿ.)

(ಪರಿಷ್ಕರಣೆ: ಹೆಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ